ಮಾರ್ಟನ್, ವಿಲಿಯಮ್ ತಾಮಸ್ ಗ್ರೀನ್
1819-6. ಅಮೆರಿಕದ ದಂತವೈದ್ಯ.  ಶಸ್ತ್ರಕ್ರಿಯೆಯ ಸಮಯದಲ್ಲಿ ತಾತ್ಕಾಲಿಕವಾಗಿ ಜ್ಞಾನತಪ್ಪಿಸಿ ನೋವು ತಿಳಿಯದಂತೆ ಮಾಡಲು ಅಂದಿಗೆ ರಹಸ್ಯವಾಗಿದ್ದ ಒಂದು ಬಾಷ್ಪಶೀಲ ದ್ರವದ  ಬಾಷ್ಪವನ್ನು ಉಸಿರಾಡಿಸುವ ವಿಧಾನವನ್ನು 1846 ಅಕ್ಟೊಬರ್ 16 ರಂದು ಬಾಸ್ಟನಿನ ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆಯಲ್ಲಿ ಮೊತ್ತಮೊದಲಿಗೆ ಸಾರ್ವಜನಿಕವಾಗಿ ಪ್ರದರ್ಶಿಸಿದಾತ. ಸಕಲ ಸಂವೇದನೆಗಳನ್ನೂ ತಾತ್ಕಾಲಿಕವಾಗಿ ಅಡಗಿಸುವ ಇಂಥ ವಸ್ತುಗಳಿಗೆ ಅನೆಸ್ಥಟಿಕ್ಸ್ (ಸಮವೇದನಾಶಕಗಳು ; ಅರಿವಳಿಕಗಳು) ಎಂದು ವೆಂಡಲ್ ಹೋಮ್ಸ್ ನಾಮಕರಣ ಮಾಡಿದ.

    ಮಾರ್ಟನ್ 1819  ಆಗಸ್ಟ್ 9 ರಂದು ಮ್ಯಾಸಚೂಸೆಟ್ಸಿನ ಚಾರ್ಲ್‍ಟನ್ ಎಂಬಲ್ಲಿ ಜನಿಸಿದ.  ತಂದೆ ಧನಿಕನಾದ್ದರಿಂದ ಮಗನಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕೆಂದು ಆಸೆ.  ಆದರೆ ನಾಚಿಕೆ ಸಂಕೋಚ ಸಂಶಯಗಳ ಮುದ್ದೆಯಾಗಿದ್ದ ಮಾರ್ಟನ್ ತಂದೆಯ ಆಶಯ ಈಡೇರಿಸುವಷ್ಟು ಸಮರ್ಥನಾಗಿರಲಿಲ್ಲ.  ಅಂತೂ ಬಾಲ್ಟಿಮೋರಿನಲ್ಲಿ ಆಗತಾನೇ ಪ್ರಾರಂಭವಾಗಿದ್ದ ದಂತವೈದ್ಯಶಾಲೆಯಿಂದ ಹೊರಬಿದ್ದ ಮೊದಲ ತಂಡದ ದಂತವೈದ್ಯರ ಪೈಕಿ ಒಬ್ಬನಾಗಿ ಅರ್ಹತೆ ಪಡೆದ.  ಇಷ್ಟರಲ್ಲೆ ತಂದೆಯೂ ಹಣ ಕಳೆದುಕೊಂಡು ಬಡತನಕ್ಕೆ ಕುಸಿದದ್ದರಿಂದ ಮಾರ್ಟನ್ ದಂತವೈದ್ಯ ವೃತ್ತಿಯಲ್ಲಿ ಖಾಸಗಿಯಾಗಿ ತೊಡುವುದು ಅನಿವಾರ್ಯವಾಯಿತು.  ಸ್ವಲ್ಪ ಕಾಲ ಬೇರೆ ಸ್ಥಳದಲ್ಲಿ ಕೆಲಸ ಮಾಡಿ ಅನಂತರ 1844 ರಲ್ಲಿ ಬಾಸ್ಟನ್ನಿನಲ್ಲಿ ಹೊರೆಸ್ ವೆಲ್ಸ್ ಎಂಬ ಸಹೋದ್ಯೋಗಿಯೊಡನೆ ಜಂಟಿಯಾಗಿ ಉದ್ಯಮ ಪ್ರಾರಂಭಿಸಿದ.  ಈ ಮಧ್ಯೆ ಹಾರ್ವರ್ಡ್ ವೈದ್ಯಕೀಯ ಶಾಲೆಯಲ್ಲೂ ವೈದ್ಯವ್ಯಾಸಂಗ ಮಾಡಿ ಅರ್ಧಾತಂಕದಿಂದ  ಅದನ್ನು ಕೈಬಿಟ್ಟುದ್ದೂ ಆಗಿತ್ತು.

    ಪ್ರತಿಯೊಬ್ಬ ದಂತವೈದ್ಯನೂ ಆಗ ಯಾವುದೋ ಒಂದು ಬಾಬಿನಲ್ಲಿ ಹೆಚ್ಚು ಕುಶಲತೆಯಿಂದ ಕೆಲಸಮಾಡುವುದೂ ಹಾಗೆ ಮಾಡುವಾಗ ತನ್ನದೇ ಆದ ಗುಟ್ಟಿನ ಕ್ರಮ ಅನುಸರಿಸುವುದೂ ಅಂದಿನ ಸಂಪ್ರದಾಯವಾಗಿತ್ತು.  ಅದರಂತೆಯೇ ಮಾರ್ಟನ್ ಕೂಡ ಬಿದ್ದುಹೋದ ಹಲ್ಲಿನ ಸ್ಥಳದಲ್ಲಿ ಕೃತಕ ಹಲ್ಲನ್ನು ನೆಲೆಗೊಳಿಸುವ ಬಾಬಿನಲ್ಲಿ ಕುಶಲಿ ಎನ್ನಿಸಿದ.  ಈ ಕಾರ್ಯಕ್ಕಾಗಿ ವ್ಯಕ್ತಿಯಲ್ಲಿ ಅನೇಕ ವೇಳೆ ಇನ್ನೂ ಉಳಿದುಕೊಂಡೇ  ಇರುತ್ತಿದ್ದ ಹಲ್ಲಿನ ಬೇರುಗಳನ್ನು ಕಿತ್ತುಹಾಕಬೇಕಾಗುತ್ತಿತ್ತು.  ಇದು ತೀವ್ರ ನೋವು ಉಂಟುಮಾಡುತ್ತಿದ್ದ ಕ್ರಿಯೆ ಎಂಬುದು ವ್ಯಕ್ತ.  ಆದ್ದರಿಂದ ಈ ಕ್ರಿಯೆಯ ವೇಳೆ ನೋವನ್ನು ಅಡಗಿಸಬಲ್ಲ ಒಂದು ವಸ್ತುವಿಗಾಗಿ ಮಾರ್ಟನ್ ಶೋಧನೆ ನಡೆಸಿದ್ದ.

     ದಂತಚಿಕಿತ್ಸೆಯ ವೇಳೆ ನೋವು ತಿಳಿಯದಂತೆ ಮಾಡಲು ಹೊರೇಸ್ ವೆಲ್ಸ್ 1844ರ ಕೊನೆಯಲ್ಲಿ ನೈಟ್ರಸ್ ಆಕ್ಸೈಡ್‍ನ್ನು ಉಸಿರಾಡಿಸುವ ವಿಧಾನ ಪ್ರಾರಂಭಿಸಿ ಇದರಲ್ಲಿ ಅನೇಕ ವೇಳೆ ಸಿದ್ಧಿಗಳಿಸಿಯೂ ಇದ್ದ.  ಹೆಚ್ಚು ಪ್ರಚಾರಕ್ಕಾಗಿ ಈ ವಿಧಾನದ ಸಾರ್ವಜನಿಕ ಪ್ರದರ್ಶನ ನೀಡಬೇಕೆಂದು ನಿರ್ಧರಿಸಿದ.  ಮ್ಯಾಸಚೂಸೆಟ್ಸ್ ಆಸ್ಪತ್ರೆಯಲ್ಲಿ ಅಲ್ಲಿಯ ಶಸ್ತ್ರಕ್ರಿಯಾತಜ್ಞರ ನೇತೃತ್ವದಲ್ಲಿ ಮಾರ್ಟನ್ನನ ಸಹಾಯದಿಂದ 1845ರ ಪ್ರಾರಂಭದಲ್ಲಿ ಇದು ಜರಗುವಂತೆ ಏರ್ಪಡಿಸಿದ.  ದುರದೃಷ್ಟವಶಾತ್ ರೋಗಿಗೆ ಜ್ಞಾನತಪ್ಪದೆ ಹಲ್ಲು ಕೀಳುತ್ತಿದ್ದಾಗ ಆತನಿಗೆ ಅತೀವನೋವು ಉಂಟಾಯಿತು.  ಇದರಿಂದ ವೆಲ್ಸ್ ಅವಹೇಳನಕ್ಕೆ ಈಡಾಗಿ ನೈಟ್ರಸ್ ಆಕ್ಸೈಡ್ ಬಳಕೆಯನ್ನು ಕೈಬಿಟ್ಟ.  ನೈಟ್ರಸ್ ಆಕ್ಸೈಡಿಗಿಂತ ಚೆನ್ನಾಗಿ ಈತರ್ ಬಳಕೆಯಿಂದ ನೋವು ಕಡಿಮೆ ಮಾಡಬಹುದೆಂಬ ಸಲಹೆ ಅವನ ಪ್ರಯೋಗದ ಹಂತದಲ್ಲೆ ಬಂದಿತ್ತಾದರೂ ಈತರ್ ಅಪಾಯಕರ ಎಂಬ ಹೆದರಿಕೆ ಇದ್ದುದರಿಂದ ಇದನ್ನು ಬಳಸುತ್ತಿರಲಿಲ್ಲ.

     ಅಂತೂ ನೋವು ಅಡಗಿಸುವ ಕ್ರಮ ಅಗತ್ಯವಾಗಿದ್ದರೂ ಸರಿಯಾದ ವಿಧಾನ ಪತ್ತೆ ಆಗದ್ದರಿಂದ ಮನುಷ್ಯನ ದೇಹಕಾರ್ಯ ಹಾಗೂ ರೋಗಗಳ ಬಗ್ಗೆ ಹೆಚ್ಚು ಮಾಹಿತಿ ಪಡೆಯಬೇಕು ಎಂದು ಮಾರ್ಟನ್ ಗ್ರಹಿಸಿದ.  ಇದಕ್ಕಾಗಿ ಎರಡು ಪ್ರಸಿದ್ಧ ವಿಶ್ವವಿದ್ಯಾಲಯಗಳಿಂದ ವೈದ್ಯಕೀಯ ಪದವಿ ಪಡೆದು ಶಸ್ತ್ರಕ್ರಿಯಾತಜ್ಞನೂ ಶಸ್ತ್ರ ವಿಜ್ಞಾನ ಬೋಧಕನೂ ಆಗಿದ್ದ ಮತ್ತು ಬಾಸ್ಟನ್ನಿನಲ್ಲೇ ಇದ್ದ ಚಲ್ರ್ಸ್ ಜ್ಯಾಕ್ಸನ್ ಎಂಬವನಲ್ಲಿ ತರಬೇತಿ ಪಡೆಯಲು ಸೇರಿದ.  ನೋಯುತ್ತಿದ್ದ ಹಲ್ಲಿಗೆ ಈತರನ್ನು ಲೇಪಿಸಿದರೆ ನೋವು ಕಡಿಮೆ ಆಗುವುದೆಂದು ಆಗಲೇ ಸುಮಾರಾಗಿ ಪ್ರಚಲಿತವಿದ್ದ ವಿಷಯವನ್ನು ಪ್ರಸಂಗತ್ವೇನ ಜ್ಯಾಕ್ಸ್‍ನ್ ಮಾರ್ಟನ್ನನಿಗೆ ತಿಳಿಸಿದ.  ಅಲ್ಲದೆ ಸುಲಭವಾಗಿ ಬಾಷ್ಪವಾಗುವ ಈತರಿನ ಬಾಷ್ಪವನ್ನು ಕೊಂಚಕಾಲ ಉಚ್ಛ್ವಸಿಸಿದರೆ ಅಮಲೇರಿದಂತಾಗುವುದೆಂದೂ ಈ ಅನುಭವ ಪಡೆಯಲೆಂದೇ ಅನೇಕರು ಅದನ್ನು ಉಚ್ಛ್ವಸಿಸುದರೆಂದೂ ಹೇಳಿದ.  ಇದರ ವಿಷಯವಾಗಿ ಇನ್ನೂ ಹೆಚ್ಚಾಗಿ ತಿಳಿದುಕೊಳ್ಳಲು ಮಾರ್ಟನ್ ತನ್ನ ನಾಯಿಯ ಮೇಲೆ ಹಾಗೂ ಸ್ವತಃ ತನ್ನ ಮೇಲೆಯೇ ಈತರ್ ಬಾಷ್ಪವನ್ನು ಪ್ರಯೋಗಿಸಿ ಅದರಿಂದ ಜ್ಞಾನ ತಾತ್ಕಾಲಿಕವಾಗಿ ತಪ್ಪಿ ನೋವು ತಿಳಿಯದಂತಾಗುವುದೆಂಬುದನ್ನು ಖಚಿತಪಡಿಸಿಕೊಂಡ.  ಆದರೆ ಇದನ್ನು ಮಾತ್ರ ಗುಟ್ಟಾಗಿ ಇಟ್ಟುಕೊಂಡು ಹಣ ಸಂಪಾದಿಸಬೇಕೆಂಬ ಆಸೆಯಿಂದ ಬಳಸುವ ದ್ರವ ಅತಿ ರಹಸ್ಯವಾದುದ್ದು, ಈತರಿನ ವಾಸನೆಯಂತೆಯೇ ವಾಸನೆ ಇರುವ ದ್ರವ ಎಂದು ಹೇಳಿ ಬಳಸಬೇಕಾದ ಈತರಿನ ಲಕ್ಷಣಗಳನ್ನೂ ಅದರ ಆವಿಯನ್ನು ಪಡೆಯಲು ತಕ್ಕ ಸಾಧನ ಹಾಗೂ ಉಸಿರಾಡಲು ತಕ್ಕ ಮುಖವಾಡ ತಪಶೀಲವನ್ನೂ ಉಪಾಯದಿಂದ (ಅಂದರೆ ತಾನು ಯಾವ ಉದ್ದೇಶಕ್ಕಾಗಿ ಇವನ್ನು ಪಡೆಯುತ್ತಿದ್ದೇನೆ ಎಂಬುದರ ಸುಳಿವು ಕೊಡದೆ) ಜ್ಯಾಕ್ಸ್‍ನ್ನಿನಿಂದ ಸಂಪಾದಿಸಿದ.  ಕೊನೆಗೆ 1846 ಸೆಪ್ಟೆಂಬರ್ 30 ರಂದು ಹಲ್ಲುಗಳನ್ನು ಕೀಳಲು ಈತರ್ ಆವಿಯನ್ನು ಬಳಸಿ ಜಯಶೀಲನಾದ.  ಮುಂದೆ ಇನ್ನೂ ನಾಲ್ಕಾರು ಸಂದರ್ಭಗಳಲ್ಲಿ ಈತರ್ ಬಾಷ್ಪವನ್ನು ಬಳಸಿನೋಡಿ ಅದರ ಉಪಯುಕ್ತ ತನ್ನ ಮನಸ್ಸಿನಲ್ಲಿ ಖಾತರಿ ಆದಮೇಲೆ ತಾನೂ ಬಾಸ್ಟನ್ನಿನ ಆಸ್ಪತ್ರೆಯಲ್ಲಿ ಸಾರ್ವಜನಿಕ ಪ್ರದರ್ಶನ ಏರ್ಪಡಿಸಿ ತನ್ನ ಗುಟ್ಟು ದ್ರವದ ಮಹಿಮೆಯನ್ನು ತೋರಿಸಿದ.  ಬಾಸ್ಟನ್ ಆಸ್ಪತ್ರೆಯ ತಜ್ಞರು ಇದನ್ನು  ಕಣ್ಣಾರೆ ಕಂಡು ಹೊಗಳಿದ ಮೇಲೆ ಮಾರ್ಟನ್ ಈ ರಹಸ್ಯ ದ್ರವದ ಏಕಸ್ವ, (ಪೇಟೆಂಟ್) ಪಡೆಯಲು ಸರ್ಕಾರಕ್ಕೆ ಅರ್ಜಿ ಹಾಕಿದ.   ಆದರೆ ಗುಟ್ಟುಮೆಲ್ಲಮೆಲ್ಲನೆ  ರಟ್ಟಾಗುತ್ತ ಬಂತು.  ಜೊತೆಗೆ ಬಾಸ್ಟನ್ನಿನ ವೈದ್ಯರುಗಳು ಬಹಿರಂಗವಾಗಿ ಒಂದು ರಹಸ್ಯ ವಸ್ತುವಿಗೆ ಉತ್ತೇಜನ ಕೊಟ್ಟುದ್ದಕ್ಕಾಗಿ ವೈದ್ಯ ಪ್ರಪಂಚದ ಕಟುಟೀಕೆಗಳಿಗೆ ಗುರಿಯಾದರು.  ಆದ್ದರಿಂದ ಗುಟ್ಟನ್ನು ಬಹಿರಂಗಗೊಳಿಸುವ ತನಕವೂ ಮಾರ್ಟನ್ನನಿಗೆ ಅವರಿಂದ ಪುರಸ್ಕಾರ ದೊರೆಯುವಂತಿರಲಿಲ್ಲ.
 
   ವಿಷಯ ಹೀಗೆ ತಿರುಗಿದ ಮೇಲೆ ಮಾರ್ಟನ್ ಅವರಿಗೆ ಮಾತ್ರ ಈ ದಸ್ತು ಸಾಕ್ಷಾತ್ ಈತರೇ ಎಂದು ಹೇಳಬೇಕಾಯಿತು.  ಈ ಎಲ್ಲ ಸಂದರ್ಭಗಳಿಂದ ಮಾರ್ಟನ್ನನಿಗೆ ರಹಸ್ಯ ಔಷಧದ ಏಕಸ್ವವೇನೋ ದೊರೆಯಿತು.  ಆದರೆ ಮೊದಲು ಬಾಸ್ಟನ್ ಆಸ್ಪತ್ರೆಯ ವೈದ್ಯರೂ ಮುಂದೆ ಒಬ್ಬೊಬ್ಬರಾಗಿ ಇತರ ಖಾಸಗಿ ವೈದ್ಯರೂ ಅದನ್ನು  ಉಲ್ಲಂಘಿಸಲು ಪ್ರಾರಂಭಿಸಿದರು.  ದ್ರವ್ಯ ಈತರ್ ಎಂದೇ ರುಜುವಾತಾದರೆ ಮತ್ತು ಹಾಗೆಂದು ಸ್ವತಃ ಮಾರ್ಟನ್ನನೇ ಒಪ್ಪಿಕೊಂಡಿದ್ದಾನೆ ಅಂದ ಮೇಲೆ ಈ ಸಾಮಾನ್ಯ ರಾಸಾಯನಿಕದ ಮೇಲೆ ಅವನ ಸ್ವಾಮ್ಯ ಹೇಗೆ ಇದ್ದಿತು ಎಂಬುದು ಇವರ ವಾದ.  ಅಂತೂ ಇದರಿಂದ ಮಾರ್ಟನ್ನನಿಗೆ ಬರುತ್ತಿದ್ದ ಏಕಸ್ವ ವರಮಾನ ಶೀಘ್ರವಾಗಿ ನಿಂತುಹೋಯಿತು.  ಏಕಸ್ವದಿಂದ ಅಗಾಧ ಹಣ ಸಂಪಾದಿಸುವ ಹುಮ್ಮಸ್ಸಿನಲ್ಲಿ ಮಾರ್ಟನ್ ದಂತವೈದ್ಯ ವೃತ್ತಿಯನ್ನು ಅಲಕ್ಷ್ಯಮಾಡಿದ್ದ.  ಈತರ್ ಬಾಷ್ಟವನ್ನು ಸಲೀಸಾಗಿ ಪ್ರಯೋಗಿಸುವಂತೆ ವಿಶಿಷ್ಟ ಸಲಕರಣೆಗಳನ್ನು ತಯಾರಿಸಿ ಅವನ್ನು ಅಗಾಧ ಸಂಖ್ಯೆಯಲ್ಲಿ ತಯಾರಿಸಲು ಹಣಹೂಡಿ ಕೈ ಬರಿದು ಮಾಡಿಕೊಂಡಿದ್ದ. ಆದ್ದರಿಂದ ಕೆಲವು ಹಿತ ಚಿಂತಕರು ಸೂಚನೆಯಂತೆ ಏಕಸ್ವದ ಅಧಿಕಾರ ತ್ಯಜಿಸಿ ವೈದ್ಯಕೀಯದಲ್ಲಿ ಅತಿ ಪ್ರಯೋಜಕವಾದ ಸಂವೇದನನಾಶಕವನ್ನೂ ಅದಕ್ಕಾಗಿ ಬಳಸುವ ವಸ್ತುವನ್ನೂ ಮೊತ್ತ ಮೊದಲಿಗೆ ಆವಿಷ್ಕರಿಸಿದ್ದಕ್ಕಾಗಿ ಸರ್ಕಾರದಿಂದ ಗೌರವಸಂಭಾವನೆ ಬೇಡಿ ಅರ್ಜಿ ಹಾಕಿಕೊಂಡ.  ಇದೇ ವೇಳೆಗೆ ಈತರಿನ ಆವಿಯನ್ನು ಪ್ರಯೋಗಿಸಬೇಕಾದರೆ ಮಾರ್ಟನ್ ತಯಾರಿಸಿ ಮಾರಾಟಮಾಡುತ್ತಿದ್ದ ವಿಶೇಷ  ಸಲಕರಣೆ ಅನಗತ್ಯವೆಂದೂ ಈತರನ್ನು ಸ್ಪಂಜಿನ ಮೇಲೆ ಸುರಿದು ಮೂಗು ಬಾಯಿಗಳ ಮೇಲಿಟ್ಟು ಬಟ್ಟೆ ಮುಚ್ಚಿದರೆ ಸಾಕೆಂದೂ ವೈದ್ಯರು ಕಂಡುಕೊಂಡು ಹಾಗೆಯೇ ಮಾಡತೊಡಗಿದರು.  ಇದರಿಂದ ಸಲಕರಣೆ ಮಾರಾಟದಿಂದ ಬರುವ ಹಣವೂ ಸೊನ್ನೆ ಆಯಿತು.

    ಇವಿಷ್ಟೇ ಸಲ್ಲದು ಎಂಬಂತೆ ಜ್ಞಾನತಪ್ಪಿಸಿ ನೋವು ಅಡಗಿಸುವ ವಿಧಾನವನ್ನು ಆವಿಷ್ಕರಿಸಿದ ಮೊದಲಿಗ ತಾನೇ ಎಂಬ ಮಾರ್ಟನ್ನನ ವಾರಸ್ಸಿಗೂ ಚ್ಯುತಿ ಬಂತು.  ವೆಲ್ಸ್ ತಾನು ನೈಟ್ರಿಕ್ ಆಕ್ಸೈಡ್‍ನ್ನು ಇದಕ್ಕೆ ಮುಂಚೆಯೇ ಈ ಕಾರ್ಯಸಾಧನೆಗಾಗಿ ಬಳಸಿದ್ದೆನೆಂದೂ ಆದ್ದರಿಂದ ನೋವು ಶಮನದ ಪ್ರಥಮ ಆವಿಷ್ಕಾರದ ಹಕ್ಕು ತನಗೇ ಸೇರಬೇಕೆಂದೂ ಪ್ರಚಾರ ಪ್ರಾರಂಭಿಸಿದ.  ಪ್ರಥಮ ಆವಿಷ್ಕಾರದ ಗೌರವ ಹಾಗೂ ಸಂಭಾವನೆಗಳನ್ನು ಮಾರ್ಟನ್ ಲಪಟಾಯಿಸಿ ಬಿಟ್ಟಿದ್ದನೆಂದು ಭಾವಿಸಿದ ವೆಲ್ಸನ ಮನಸ್ಸು ಬಹಳವಾಗಿ ಕೆಟ್ಟಿತ್ತು.  ಬಹುಶಃ ಮೊದಲಿನಿಂದಲೂ ಇವನ ಬುದ್ಧಿ ಅಷ್ಟು ಸ್ತಿಮಿತದಲ್ಲಿರಲಿಲ್ಲವೆಂದು ತೋರುತ್ತದೆ.  ಅಂತೂ ಈ ಮನೋವಿಕಲ್ಪ ಸ್ಥಿತಿಯಲ್ಲಿ ಒಂದು ಸಲ ಹಠಾತ್ತನೆ ಉದ್ರೇಕಗೊಂಡು ಬೀದಿ ಹೆಂಗಸೊಬ್ಬಳ ಮುಖದ ಮೇಲೆ ದ್ರಾವಣ ಚೆಲ್ಲಿ ತುರಂಗವಾಸ ಅನುಭವಿಸುವಂತಾಯಿತು.  ಅಪಮಾನ ತಡೆಯಲಾರದೆ ಅಲ್ಲೇ ಆತ್ಮಹತ್ಯೆ ಮಾಡಿಕೊಂಡ.

    ಮಾರ್ಟನ್ನನಿಗೆ ಒದಗಿದ್ದ ತೊಂದರೆಗಳು ವೆಲ್ಸನ ಆತ್ಮಹತ್ಯೆಯಿಂದ ನಿವಾರಣೆ ಆಗಲಿಲ್ಲ.  ಜ್ಯಾಕ್ಸನ ತಾನು 1842 ರಲ್ಲಿ ಸ್ವಂತಾನುಭವದಿಂದ ಈತರ್ ಈ ಗುಣದ ಪ್ರಥಮ ಆವಿಷ್ಕಾರಕ್ಕೆ ತಾನು ಕಾರಣನೆಂದೂ ತಾನೇ ಮಾರ್ಟನ್ನನಿಗೆ ಹೇಳಿಕೊಟ್ಟು ಅವನಿಂದ ಪ್ರದರ್ಶನ ಏರ್ಪಡಿಸಿದನೆಂದೂ ಗೌರವ ಹಾಗೂ ಸಂಭಾವನೆ ತನಗೆ ಬರಬೇಕೆಂದು ಪ್ರಚಾರ ಮಾಡುತ್ತ ಮಾರ್ಟನ್ನನ ಸರ್ಕಾರದಿಂದ ಬರಬಹುದಾಗಿದ್ದ ಗೌರವಧನಕ್ಕೆ ಅಡ್ಡಿ ತಂದ.  ಈ ವೇಳೆಗೆ ಈತರಿನ ಬಳಕೆ ಬಂದು 8 ವರ್ಷಗಳು ಕಳೆದಿದ್ದರೂ ಮಾರ್ಟನ್ನನಿಗೆ ಹೆಸರೂ ಬರಲಿಲ್ಲ.  ಹಣವೂ ಬರಲಿಲ್ಲ.  ಜೊತೆಗೆ ಕೈಲಿದ್ದ ಹಣವನ್ನೂ ಕಳೆದುಕೊಂಡಿದ್ದ.   ಏಕಸ್ವವನ್ನು ಪ್ರಾರಂಭದಲ್ಲಿ ಗಣನೆಗೆ ತೆಗೆದುಕೊಂಡು ಸಂಭಾವನೆ ಪಾವತಿಮಾಡಿದ್ದವರೂ ಮಾರ್ಟನ್ ಅದನ್ನು ವಾಪಸ್ಸು ಮಾಡಬೇಕೆಂದು ಒತ್ತಾಯಿಸಿದರು.

    ಇಷ್ಟು ರಗಳೆಯ ನಡುವೆ ಇನ್ನೊಂದು ಗುಂಡು ಸಿಡಿಯಿತು.  ಅಮೆರಿಕದ ಜಾರ್ಜಿಯ ರಾಜ್ಯದ ಲಾಂಗ್ ಎಂಬ ವೈದ್ಯ ತಾನು ಶಸ್ತ್ರಕ್ರಿಯೆಯಲ್ಲಿ ಜ್ಞಾನತಪ್ಪಿಸುವುದಕ್ಕಾಗಿ ಇತರನ್ನು 1842 ರ ಆಧಿಯಲ್ಲೇ ಬಳಸಿದ್ದನೆಂದೂ ಅದು ಆ ವರ್ಷದ  ವೈದ್ಯಕೀಯ ನಿಯತಕಾಲಿಕದಲ್ಲಿ ಪ್ರಕಟವಾಗಿದೆಯೆಂದೂ ಆದ್ದರಿಂದ  ಪ್ರಥಮ ಆವಿಷ್ಕಾರದ ಗೌರವ ತನಗೆ ಸಲ್ಲಬೇಕೆಂದೂ ಹಣಕ್ಕಾಗಿ ಖಂಡಿತ ವಾದ ಹೂಡುತ್ತಿಲ್ಲವೆಂದೂ ಅಮೆರಿಕದ ಸೆನೆಟಿನ ಜಾರ್ಜಿಯದ ಪ್ರತಿನಿಧಿಗೆ ತಿಳಿವಳಿಕೆ ಪತ್ರ ಬರೆದು ಹಾಕಿದ (1854).  ನಿಜಸ್ಥಿತಿಯನ್ನು ಹೊರಹಾಕಬೇಕೆಂದು ಈ ಪ್ರತಿನಿಧಿ ಜ್ಯಾಕ್ಸನನಿಗೂ ಮಾರ್ಟನ್ನನಿಗೂ ತಗಾದೆ ಪತ್ರ ಬರೆದ.  ಇತ್ತ ಜ್ಯಾಕ್ಸನ್ ಸ್ವತಃ ಲಾಂಗ್ ಇದ್ದ ಸ್ಥಳಕ್ಕೆ ಹೋಗಿ ಅಲ್ಲಿ ಆತ ಹಾಜರು ಪಡಿಸಿದ ದಾಖಲೆಗಳನ್ನು ನೋಡಿ ಈತರಿನ ಪ್ರಥಮ ಬಳಕೆಯನ್ನು ತಾನು ಮಾಡಿದ್ದಕ್ಕಿಂತಲೂ ಮೊದಲೇ ಲಾಂಗ್ ಮಾಡಿದ್ದನೆಂದು ಒಪ್ಪಿಕೊಂಡ.  ಅಲ್ಲದೆ ಸೆನೆಟಿಗೆ ತಾನೇ ಪ್ರಥಮ ಗೌರವ ಮತ್ತು ಹಣಕ್ಕಾಗಿ ಕೊಟ್ಟಿದ್ದ ಅರ್ಜಿಯನ್ನು ವಾಪಸ್ಸು ತೆಗೆದುಕೊಂಡ ಕೂಡ.  ಇದು ಮಾರ್ಟನ್ನನಿಗೆ ತಡೆಯಲಾರದ ಹೊಡೆತವಾಯಿತು.

    ಇಂಥ ಆಘಾತ ಕೊಡಬೇಕೆಂದೇ ಬಹುಶಃ ಜ್ಯಾಕ್ಸನ್ ಹೀಗೆಲ್ಲ ಮಾಡಿದನೆಂದು ತೋರುತ್ತದೆ.  ಮಾರ್ಟನ್ನನ ಮೇಲೆ ಜ್ಯಾಕ್ಸನ್ನನಿಗೆ ಇಷ್ಟು ಕ್ರೋಧ ಏಕೆ ಬಂತೋ ತಿಳಿಯದು.  ಬಹುಶಃ ಇವನೂ ಸ್ವಲ್ಪ ಬುದ್ಧಿಗೆಟ್ಟವನೆಂದೇ ತೋರುತ್ತದೆ.  ಟೆಲಿಗ್ರಾಫ್ ಸಾಧನವನ್ನು ಉಪಜ್ಞಿಸಿದವನು ತಾನೇ ಎಂದೂ ಗನ್ ಕಾಟನ್ ಎಂಬ ಸಿಡಿಮದ್ದನ್ನು ಕಂಡುಹಿಡಿದವನು ತಾನೇ ಎಂದೂ ಬೇರೆಯವರಿಗೆ ಅದರ ಗೌರವ ಸಂದಿತೆಂದೂ ಮುಂತಾಗಿ ಏನೇನೋ ಹೇಳಿಕೊಳ್ಳುತ್ತಿದ್ದ.  ಕೊನೆಗೆ ಇವನು ಹುಚ್ಚಾಸ್ಪತ್ರೆಯಲ್ಲಿ ಏಳು ವರ್ಷಗಳಿದ್ದು ಅಲ್ಲಿ ಮೃತಿಹೊಂದಿದ.

    ಮಾರ್ಟನ್ನನೊಡನೆ ಪೈಪೊಟಿಗೆ ಉಳಿದವ ಲಾಂಗ್ ಒಬ್ಬನೇ ಆದ.  ಅವನೇ ಈತರನ್ನು ಸಂವೇದನನಾಶಕವಾಗಿ ಬಳಸಿದ ಮೊದಲಿಗ ಎಂಬುದು ನಿರ್ವಿವಾದ ಆಯಿತು.  ಇಷ್ಟು ಹೊತ್ತಿಗೆ ಅಂತರ್ಯುದ್ಧ ಮೊದಲಾಗಿದ್ದರಿಂದ ಗೌರವ ಹಾಗೂ ಧನ ಯಾರಿಗೆ ಸೇರಬೇಕೆಂಬುದು ಸೆನೆಟಿನಲ್ಲಿ ಕೊನೆಗೂ ನಿರ್ಧಾರವಾಗಲೇ ಇಲ್ಲ.  ಮಾರ್ಟನ್ನಿನ ಜೀವನ ಬಲು ದುಸ್ಸಹವಾಯಿತು.

    ಸ್ನೇಹಿತರಿಂದ ಮತ್ತು ಅಂತಃಕರಣಯುಕ್ತ ಜನರಿಂದ ಆಗಾಗ ಅಷ್ಟಿಷ್ಟು ಧನ ಸಹಾಯ ಒದಗಿ ಅವನು ಜೀವನ ನಡೆಸಬೇಕಾಯಿತು.  ಈ ಹಣದಲ್ಲಿ ನ್ಯಾಯಾಲಯದಲ್ಲಿ ದಾಖಲಾಗಿದ್ದ ಅನೇಕಾನೇಕ ಕಷ್ಟ ನಷ್ಟ ಪರಿಹಾರ ಪ್ರಸಂಗಗಳನ್ನೂ ಎದುರಿಸಬೇಕಾಯಿತು.  ಸ್ವಲ್ಪ ಹೆಚ್ಚಾಗಿ ಧನ ಸಂಗ್ರಹಮಾಡಿ ಮಾರ್ಟನ್ನನ ಜೀವನವನ್ನು ಸಹ್ಯ ಮಾಡಬೇಕೆಂದು ಕೆಲವು ಸ್ನೇಹಿತರು ನ್ಯೂಯಾರ್ಕಿನಲ್ಲಿ ವಂತಿಗೆ ಎತ್ತುತ್ತಿದ್ದರು.  ಅದರಿಂದ ತನ್ನ  ಕೊನೆಗಾಲವನ್ನು ಹೇಗಾದರೂ ಕಳೆಯಬಹುದೆಂದು ಮಾರ್ಟನ್ ಆಶಿಸಿದ.  ಆದರೆ ಅದಕ್ಕೂ ಕಲ್ಲು ಬೀಳುವಂತಾಯಿತು.  ಯಾರೋ ಆಗದವರು (ಹೊಟ್ಟೆಕಿಚ್ಚಿನ ಸಹದಂತವೈದ್ಯರೂ ಸೇರಿ ಇಂಥವರು ಬೇಕಾದಷ್ಟು ಜನರಿದ್ದರು) ಮಾರ್ಟನ್ ಇಂಥ ಸಹಾಯಕ್ಕೆ ಅನರ್ಹನೆಂದೂ ಜ್ಯಾಕ್ಸನ್ನನೇ ಇತರಿಗೆ ಸಂವೇದನನಾಶಕ ಬಳಕೆಯದೆಂದೂ ನ್ಯೂಯಾರ್ಕಿನ ಪತ್ರಿಕೆಯೊಂದರಲ್ಲಿ ಪ್ರಕಟಿಸಿದರು.  ತನಗೆ ಈ ಹಣವೂ ದಕ್ಕದೇನೋ ಎಂದು ಮಾರ್ಟನ್ ಹತಾಶನಾಗಿ ನಿಜಸ್ಥಿತಿ ತಿಳಿಯಲು ನ್ಯೂಯಾರ್ಕಿಗೆ ತೆರಳಿದ.  ರಾತ್ರಿ ಅಲ್ಲಿಗೆ ಸೆಕೆ ತಾಳಲಾರದೆ ವಾಷಿಂಗ್‍ಟನ್ ಗುಡ್ಡದ ತಂಪಿನಲ್ಲಾದರೂ ವರ್ತಮಾನದಿಂದ ವಂತಿಗೆ ಹಣ ಸಂಗ್ರಹವಾಗುವುದೋ ಇಲ್ಲವೋ ತಾನು ನ್ಯೂಯಾರ್ಕಿಗೆ ಬಂದಿದ್ದೇ ಅವಿವೇಕ ಎಂದೆಲ್ಲ ಮಾತನಾಡುತ್ತ ಏಕೋ ಏನೋ ಆತಂಕ ಅವನ ಮನಸ್ಸಿಗೆ ಹತ್ತಿತು.  ಗಾಡಿಯಿಂದ ಧುಮುಕಿ ರಸ್ತೆಯಲ್ಲಿ ನಿಂತು ಬಿಟ್ಟ.  ಜನರ ಗುಂಪು ಸೇರುತ್ತಿದ್ದ ಮತೆ ಅವನಿಗೆ ಜ್ಞಾನವೂ ತಪ್ಪಿ ಅವನು ಅಲ್ಲೆ ಕುಸಿದುಬಿದ್ದ.  ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಅವನ ಪ್ರಾಣ ಹೋಗಿದೆ ಎಂದು ತಿಳಿಸಿದರು (15-6-1868)
 
   ಈತರನ್ನು ಉಸಿರಾಡಿಸಿ ತಾತ್ಕಾಲಿಕವಾಗಿ ಜ್ಞಾನತಪ್ಪಿಸಿ ನೋಯುವಂಥ ದಂತದ ಮತ್ತು ಇತರ ಬಗೆಯ ಶಸ್ತ್ರಕ್ರಿಯೆಯನ್ನು ನೋವು ತಿಳಿಯದಂತೆ ಮಾಡುವ ಕ್ರಮದ ಅವಿಷ್ಕರ್ತೃಗಳೆಂದು ನಾಲ್ಕು ಮಂದಿ ತಮ್ಮ ವಾರಸು ಹೂಡಿದರು.  ಅವರ ಪೈಕಿ ವೆಲ್ಸ್ ಮತ್ತು ಜ್ಯಾಕ್ಸನ್ನರ ಹಕ್ಕುಗಳು ಮನ್ನಾಮಾಡುವಂತೆಯೇ ಇರಲಿಲ್ಲ.  ಹಿಂದೆ ಇನ್ನೂ ಯಾರೋ ಆವಿಷ್ಕರಿಸಿದ್ದನ್ನೇ ಇವರೂ ಪುನರಾವರ್ತಿಸಿದ್ದರು ಅಷ್ಟೆ.  ಆವಿಷ್ಕಾರ ಗೌರವಕ್ಕೆ ಬಾದ್ಯರೆಂದು ಲಾಂಗ್ ಮತ್ತು ಮಾರ್ಟನ್ ಇಬ್ಬರಲ್ಲಿ ಇಬ್ಬರನ್ನು ಗಣಿಸಬೇಕಾಗಿತ್ತು.  ಲಾಂಗ್ ಸುಮಾರು 15 ವರ್ಷಗಳಷ್ಟು ಮೊದಲೇ ಈತರನ್ನು ಬಳಸಿ ಶಸ್ತ್ರಕ್ರಿಯೆ ಜರಗಿಸಿದ್ದು ದಾಖಲೆಗಳಿಂದ ಸಮರ್ಥಿಸಲ್ಪಟ್ಟಿದ್ದರೂ ಅವನಾದರೂ ಅದೇ ಕ್ರಮವನ್ನು ಪುನಃ ಪುನಃ ಬಳಸಿದವನೆಂಬುದು ನಿಶ್ಚಯವಿಲ್ಲ.  ಈತರಿನ ಬಳಕೆಯಿಂದ  ತಾತ್ಕಾಲಿಕವಾಗಿ ಜ್ಞಾನತಪ್ಪಿಸಿ ತತ್ಫಲವಾಗಿ ಸಂವೇದನನಾಶವನ್ನು ಸ್ವಂತ ಪ್ರಯೋಗಗಳಿಂದ ಖಾತರಿ ಮಾಡಿಕೊಂಡು ಪ್ರಚಾರಕ್ಕೆ ಸಾರ್ವಜನಿಕ ಪ್ರದರ್ಶನ ಏರ್ಪಡಿಸಿ ಅದು ಮಾಮೂಲು ಕ್ರಮವಾಗುವಂತೆ ಮಾಡಿದವ ಮಾರ್ಟನ.  ಇದಕ್ಕಾಗಿ ಅವನಿಗೇ ಪ್ರಥಮ ಆವಿಷ್ಕರ್ತೃ ಎಂದು ಗೌರವ ಸಲ್ಲತಕ್ಕದ್ದು.  ಲಾಂಗ್‍ನ ವಾರಸ್ಸನ್ನು ಕಡೆಗಣಿಸಬಾರದು ನಿಜ.  ಆದರೆ ಯಾವುದೋ ಆವಿಷ್ಕಾರಮಾಡಿ ಅದನ್ನು ಅಷ್ಟಕ್ಕೆ ಕೈಬಿಡುವುದಕ್ಕೂ ಅದೇ ಆವಿಷ್ಕಾರವನ್ನು ಸ್ವತಂತ್ರವಾಗಿ ಪುನಃ ಮಾಡಿ ಅದರ ಉಪಯುಕ್ತತೆಯನ್ನು ಅರಿತು ಲೋಕಪ್ರಚಾರ ಮಾಡುವುದಕ್ಕೂ ವ್ಯತ್ಯಾಸವಿರುವುದನ್ನು ಗಮನಿಸಬೇಕು ಎಂಬುದು ವೆಲ್ಡ್ ಆಸ್ಲರ್ ಮುಂತಾದ ಲೋಕವಿಖ್ಯಾತ ವೈದ್ಯರುಗಳ ಅಭಿಪ್ರಾಯ.  ಇದರಂತೆ ಮಾರ್ಟನ್ನನನ್ನು ಸಂವೇದನನಾಶ ವಿಜ್ಞಾನದ ಆವಿಷ್ಕರ್ತೃವಾಗಿ ಗಣಿಸುವುದು ಯುಕ್ತ.                     
(ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ